ನಾಗರೀದಾಸ
1700- ಹಿಂದೀ ಭಕ್ತ ಕವಿ. ಈತನ ಪೂರ್ವಾಶ್ರಮದ ಹೆಸರು ಸಾವಂತಸಿಂಹ. ಈತ ಕೃಷ್ಣಗಢದ ಮಹಾರಾಜನಾಗಿದ್ದ. ಇವನ ತಂದೆ ರಾಜಸಿಂಹ. ಈತ ದಿಲ್ಲೀರಾಜನ ಆಸ್ಥಾನ ಸಭೆಯಲ್ಲಿದ್ದಾಗ ತಂದೆ ತೀರಿಕೊಂಡ. ಆಗ ಇವನ ಪ್ರಾಯ 48. ದಿಲ್ಲಿಯಲ್ಲಿರುವಾಗಲೇ ಚಕ್ರವರ್ತಿ ಅಹಮ್ಮದ್ ಶಹ ಈತನಿಗೆ ಕೃಷ್ಣಗಢದ ಉತ್ತರಾಧಿಕಾರವನ್ನು ಕೊಟ್ಟ. ಆದರೆ ಈತ ಊರಿಗೆ ಮರಳುವ ಮೊದಲೇ ಅಣ್ಣ ಬಹಾದುರ್‍ಸಿಂಹ ಸಿಂಹಾಸನಾಸೀನನಾಗಿದ್ದ. ಮರಾಠ ಸಹಾಯದಿಂದ ಈತ ರಾಜ್ಯವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾಯಿತು.

ಮೊದಲೇ ಕೃಷ್ಣಭಕ್ತನಾಗಿದ್ದ ಈತ ಗೃಹಕಲಹದಿಂದ ಬೇಸತ್ತು ಎಲ್ಲವನ್ನೂ ತೊರೆದು ವಿರಕ್ತನಾಗಿ ತನ್ನ 58ನೆಯ ವಯಸ್ಸಿನಲ್ಲಿ ಮಗ ಸರ್‍ದಾರ್‍ಸಿಂಹನಿಗೆ ರಾಜ್ಯವನ್ನು ಒಪ್ಪಿಸಿ ವೃಂದಾವನಕ್ಕೆ ತೆರಳಿದ. ಅಲ್ಲಿ ತನ್ನ ಹೆಸರನ್ನು ನಾಗರೀದಾಸ ಎಂದು ಬದಲಿಸಿಕೊಂಡ.
ವೃಂದಾವನವನ್ನು ಈತ ಬಹಳ ಪ್ರೀತಿಸುತ್ತಿದ್ದ. ಒಮ್ಮೆ ಯಮುನಾನದಿಯ ಆಚೆ ದಡಕ್ಕೆ ಹೋಗಿದ್ದು ರಾತ್ರಿ ಹಿಂತಿರುಗಿ ಬಂದಾಗ ಯಾವೊಂದು ದೋಣಿಯೂ ಕಾಣದಿರಲಾಗಿ ವೃಂದಾವನ ವಿಯೋಗವನ್ನು ಸಹಿಸಲಾರದ ಈತ ಕೂಡಲೇ ನದಿಗೆ ಹಾರಿ ಈಜಿಕೊಂಡು ಈಚೆ ದಡಕ್ಕೆ ಬಂದನೆಂದು ಪ್ರತೀತಿ.

ರಾಜನಾಗಿರುವಾಗಲೇ ಈತ ಕೃಷ್ಣ ಭಕ್ತಿ ಹಾಗೂ ವ್ರಜಲೀಲಾಸಂಬಂಧಿಯಾದ ಕೃತಿಗಳನ್ನು ರಚಿಸತೊಡಗಿದ್ದ. ಈತ ಬರೆದ ಚಿಕ್ಕದೊಡ್ಡ 73 ಪುಸ್ತಕಗಳನ್ನು ಕೃಷ್ಣಗಢದಲ್ಲಿ ಸಂಗ್ರಹಿಸಿ ಇಡಲಾಗಿದೆ.

ಮನೋರಥಮಂಜರೀ, ಶೃಂಗಾರಸಾರ, ಗೋಪೀಪ್ರೇಮಪ್ರಕಾಶ, ವಿಹಾರ ಚಂದ್ರಿಕಾ, ರಾಸರಸಲತಾ, ಕೃಷ್ಣಜನ್ಮೋತ್ಸವಕವಿತ್ತ, ವೈರಾಗ್ಯವಲ್ಲೀ, ರಸಿಕರತ್ನಾವಲೀ, ರಾಮಚರಿತ್ರಮಾಲಾ, ಜುಗಲಭಕ್ತಿವಿನೋದ-ಇವು ಇವನ ಪ್ರಸಿದ್ಧ ಕೃತಿಗಳಲ್ಲಿ ಕೆಲವು. ಈತನ ಶೈಲಿಯಲ್ಲಿ ಭಕ್ತಿಯ ಸುಂದರ ಅಭಿವ್ಯಕ್ತಿಯನ್ನು ಕಾಣಬಹುದು. ನಿರೂಪಣೆಯಲ್ಲಿ ನವೀನತೆಯೂ ವಿಶಿಷ್ಟತೆಯೂ ಹಾಸುಹೊಕ್ಕಾಗಿದೆ. ಆ ಕಾಲಕ್ಕೆ ಪ್ರಚಲಿತವಾಗಿದ್ದ ಪಾರಸೀ ಕಾವ್ಯದಲ್ಲಿ ಸೂಫೀಪಂಥದ ಮಧುರಭಕ್ತಿಯನ್ನು ಇವನ ಕೃತಿಗಳಲ್ಲಿ ಗುರುತಿಸಬಹುದು. ಈತನ ಭಾಷೆ ಸರಸವಾಗಿದ್ದು ಆಡುಮಾತಿನ ಸರಳತೆಯಿಂದ ಕೂಡಿದೆ.					
		(ಎ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ